ಕಲ್ಲಿದ್ದಲಿನ ರಸಾಯನ ವೃತ್ತಾಂತ - ಕಲ್ಲಿದ್ದಲ್ಲಿನ ರಾಸಾಯನಿಕ ಗುಣ ಲಕ್ಷಣಗಳನ್ನು ಮಾತ್ರ ಈ ಲೇಖನದಲ್ಲಿ ವಿವರಿಸಿದೆ (ಕೆಮಿಸ್ಟ್ರಿ ಆಫ್ ಕೋಲ್). ಕಲ್ಲಿದ್ದಲಿನ ಇತರ ವಿವರಗಳಿಗೆ. (ನೋಡಿ- ಕಲ್ಲಿದ್ದಲು)

ಕಲ್ಲಿದ್ದಲು ಒಂದು ಒತ್ತಾದ ಪದರವುಳ್ಳ ಇಂಗಾಲದ ವಸ್ತು. ಸಸ್ಯಪದಾರ್ಥಗಳು ಸಹಸ್ರಾರು ವರ್ಷ ಭೂಗರ್ಭದಲ್ಲಿ ಹೂತುಹೋಗಿ, ಕೊಳೆತು, ಅನೇಕ ಭೌತ, ಜೀವರಾಸಾಯನಿಕ ಬದಲಾವಣೆಗಳನ್ನು ಹೊಂದಿ ಇದು ಉತ್ಪತ್ತಿಯಾಗುವುದು. ಈ ಬದಲಾವಣೆಗಳಲ್ಲಿ ಮೊದಲಿಗೆ ಉತ್ಪತ್ತಿಯಾದ ಪೀಟ್ ಎಂಬುದು ಕ್ರಮೇಣವಾಗಿ ಲಿಗ್ನೈಟ್, ಬಿಟೂಮಿನಸ್ ಮತ್ತು ಆಂಥ್ರಸೈಟ್ಸ್‌ ಎಂಬಂತೆ ಹೆಚ್ಚಿನಮಟ್ಟಿಗೆ ರೂಪ ಬದಲಾವಣೆ ಪಡೆದಿರುತ್ತದೆ. ಇವನ್ನು ಬದಲಾವಣೆಗಳ ವರ್ಗಗಳೆಂದು ವಿಜ್ಞಾನಿಗಳು ಕರೆಯುತ್ತಾರೆ. ಈ ರೀತಿಯ ವರ್ಗೀಕರಣಗಳಲ್ಲಿ ಲಿಗ್ನೈಟ್ ಕನಿಷ್ಠ ಬದಲಾವಣೆ ಪಡೆದ ವರ್ಗ; ಆಂಥ್ರಸೈಟ್ ಹೆಚ್ಚಿನ ಬದಲಾವಣೆ ಪಡೆದ ವರ್ಗ.

ಕಲ್ಲಿದ್ದಲಿನಲ್ಲಿ ಮುಖ್ಯವಾಗಿ ಸಾವಯವ (ಆಗಾರ್ಯ್‌ನಿಕ್) ಪದಾರ್ಥವಿದ್ದು ಭಿನ್ನ ಅಂಶಗಳಲ್ಲಿ ಖನಿಜ ನಿರವಯವ (ಇನಾಗಾರ್ಯ್‌ನಿಕ್) ಕಲ್ಮಷ ವಸ್ತುಗಳು ಮತ್ತು ನೀರು ಇರುತ್ತವೆ. ಕಾರ್ಬನಿಕ ಪದಾರ್ಥಗಳ ಅಂಶ ಇಂಗಾಲ, ಜಲಜನಕ, ಆಮ್ಲಜನಕ ಮತ್ತು ಸಣ್ಣಪರಿಮಾಣದಲ್ಲಿ ಸಸಾರಜನಕ ಮತ್ತು ಗಂಧಕಗಳಿಂದ ಕೂಡಿದೆ. ಕಲ್ಲಿದ್ದಲಿನ ಯೋಗ್ಯತೆಯ ಪ್ರಮಾಣ ಅದರ ಆಸನ್ನ ವಿಶ್ಲೇಷಣೆಯನ್ನು (ಪ್ರಾಕ್ಸಿಮೇಟ್ ಅನಾಲಿಸಿಸ್) ಅವಲಂಬಿಸಿದೆ. ಅದು ಈ ಕೆಳಗಿನ ಸೂತ್ರವನ್ನು ಅನುಸರಿಸುತ್ತದೆ.

ಕಲ್ಲಿದ್ದಲು=ತೇವ (ಸೆಂ.ನಲ್ಲಿ) + ಬಾಷ್ಪಶೀಲ ವಸ್ತು (ಸೆಂ.ನಲ್ಲಿ) ಬೂದಿ+ಸ್ಥಾಪಿತ ಇಂಗಾಲ ಹಾಗೂ ಕೆಲೊರಿ ಮೌಲ್ಯ. 

ಕಲ್ಲಿದ್ದಲುಗಳನ್ನು ಬಗೆಬಗೆಯ ರೀತಿಗಳಲ್ಲಿ ವರ್ಗೀಕರಿಸುತ್ತಾರೆ: ಆಸನ್ನ ವಿಶ್ಲೇಷಣೆ, ರಾಸಾಯನಿಕ ಸಂಘಟನೆಯ ಆಧಾರ, ಕಲ್ಲಿದ್ದಲಿನ ಅಂತ್ಯ ಉಪಯುಕ್ತತೆಯ ಆಧಾರ. ಇವುಗಳ ಪೈಕಿ ಆಸನ್ನ ವಿಶ್ಲೇಷಣೆ ಸಾಮಾನ್ಯವಾಗಿ ಬಳಕೆಯಲ್ಲಿರುವ ವರ್ಗೀಕರಣ ವಿಧಾನ. ಅದನ್ನು ಮುಂದೆ ವಿವರಿಸಿದೆ.

ಪೀಟ್
ಇದು ಸ್ವಲ್ಪಮಟ್ಟಿಗೆ ವಿಭಜಿತವಾದ ಸಸ್ಯಪದಾರ್ಥಗಳ ಸಂಚಯನ. ಭೂಮಿಯಿಂದ ಮೊದಲು ಹೊರತೆಗೆದಾಗ ಇದು ಮಣ್ಣಿನ ಹೆಂಟೆಗಳನ್ನು ಹೋಲುತ್ತದೆ. ಒಣಗಿಸಿದ ಪೀಟನ್ನು ಮನೆಗಳಲ್ಲಿ ಉರುವಲಾಗಿಯೂ ಮಣ್ಣಿನ ಸಂಘಟನೆಯಲ್ಲಿಯೂ ಗೊಬ್ಬರದ ಉಪಕರಣ ಕಾರ್ಯದಲ್ಲಿಯೂ ಉಪಯೋಗಿಸುತ್ತಾರೆ.

ಲಿಗ್ನೈಟ್ ಅಥವಾ ಕಂದು ಕಲ್ಲಿದ್ದಲು
ಇದು ಕನಿಷ್ಠ ದರ್ಜೆಯ ಕಲ್ಲಿದ್ದಲು. ಇದು ಅಡಕವಾಗಿರುತ್ತದೆ. ಇದರ ಬಣ್ಣ ಕಂದು ಅಥವಾ ಕಂದುಮಿಶ್ರಿತ ಕಪ್ಪೂ.  ಲಿಗ್ನೈಟ್ ಮೊದಲಿಗೆ ಅನುಪಯೋಗಿ ವಸ್ತುವಾಗಿತ್ತು. ಈಗ ಇದರಿಂದ ಕೃತಕ ಗೊಬ್ಬರಗಳನ್ನು, ರಾಸಾಯನಿಕ ವಸ್ತುಗಳನ್ನು ಮತ್ತು ಕೃತಕ ಎಣ್ಣೆಗಳನ್ನು ತಯಾರಿಸುವ ವಿಧಾನಗಳನ್ನು ಕಂಡುಹಿಡಿದಿದ್ದಾರೆ.
ಉಪಬಿಟುಮಿನಸ್ ಕಲ್ಲಿದ್ದಲು: ಇದಕ್ಕೆ ಹೊಳಪುಳ್ಳ ಕಪ್ಪುಬಣ್ಣ ಉಂಟು. ಇದನ್ನು ಬಿಟುಮಿನಸ್ ಕಲ್ಲಿದ್ದಲಿನಿಂದ ಗುರುತಿಸುವ ಬಗೆ ಸುಲಭ. ಉಪಬಿಟುಮಿನಸ್ ಕಲ್ಲಿದ್ದಲನ್ನು ಗಾಳಿಯಲ್ಲಿಟ್ಟಾಗ ತೇವವನ್ನು ಕಳೆದುಕೊಂಡು ಅದು ಪುಡಿಯಾಗುವುದು. ಬಣ್ಣ ಒಂದರ ವಿನಾ ಇದು ಸಾಧಾರಣವಾಗಿ ಲಿಗ್ನೈಟನ್ನು ಹೋಲುತ್ತದೆ.

ಬಿಟುಮಿನಸ್ ಕಲ್ಲಿದ್ದಲು
ಈ ವರ್ಗದ ಕಲ್ಲಿದ್ದಲನ್ನು ಕೆಳಕಂಡಂತೆ ಇನ್ನೂ ಕೆಲವು ಉಪಪಂಗಡಗಳಾಗಿ ವಿಂಗಡಿಸಲಾಗಿದೆ. (೧) ಕೆಳದರ್ಜೆಯ ಬಾಷ್ಪಶೀಲ (ವಾಲಟೈಲ್) ಬಿಟುಮಿನಸ್ ಕಲ್ಲಿದ್ದಲು, (೨) ಮಧ್ಯಮ ದರ್ಜೆಯ ಬಿಟುಮಿನಸ್ ಕಲ್ಲಿದ್ದಲು, (೩) ಶ್ರೇಷ್ಠ ದರ್ಜೆಯ ಬಿಟುಮಿನಸ್ ಕಲ್ಲಿದ್ದಲು. ಇವುಗಳಲ್ಲಿ ಕೆಳದರ್ಜೆಯ ಮತ್ತು ಮಧ್ಯಮ ದರ್ಜೆಯ ಕಲ್ಲಿದ್ದಲುಗಳಿಗೆ ಹೆಚ್ಚಿನ ಉಷ್ಣತಾಮೌಲ್ಯಗಳಿವೆ. ಬಿಟುಮಿನಸ್ ಕಲ್ಲಿದ್ದಲಿನಲ್ಲಿ ಕೋಕ್ ಆಗುವ ಮತ್ತು ಕೋಕ್ ಆಗದ ಎರಡು ಜಾತಿಯ ಕಲ್ಲಿದ್ದಲುಗಳಿವೆ. ಅವುಗಳ ಉಪಯೋಗ ಬಹಳವಾಗಿ ಅವುಗಳ ಗುಣವನ್ನು ಅವಲಂಬಿಸಿದೆ. ಬಿಟುಮಿನಸ್ ಕಲ್ಲಿದ್ದಲಿನ ಮುಖ್ಯ ಉಪಯೋಗ ಉಗಿಯ ಉತ್ಪಾದನೆಯಲ್ಲೂ ಕೋಕ್ ಮತ್ತು ಕಲ್ಲಿದ್ದಲಿನ ಅನಿಲಗಳ ತಯಾರಿಕೆಗಳಲ್ಲಿಯೂ ಇದೆ.

ಮಧ್ಯಮ ಆಂಥ್ರಸೈಟ್ ಕಲ್ಲಿದ್ದಲು
ಇವುಗಳಲ್ಲಿ ಬಾಷ್ಪಶೀಲ ವಸ್ತುಗಳು ಶೇ. ೮-೧೪ ರವರೆಗಿದೆ. ಈ ಕಲ್ಲಿದ್ದಲು ಆಂಥ್ರಸೈಟ್ ಕಲ್ಲಿದ್ದಲಿಗಿಂತ ಸುಲಭವಾಗಿ ಹೊತ್ತಿಕೊಳ್ಳುತ್ತದೆ. ಇದು ಹಳದಿ ಬಣ್ಣದ ಸಣ್ಣ ಜ್ವಾಲೆಯಿಂದ ಉರಿಯುವುದು. ಉರಿಸುವ ಜಾಲರಿಯ ಮೇಲೆ ಈ ವರ್ಗದ ಕಲ್ಲಿದ್ದಲು ಬಹು ಬೇಗ ಉರಿದು ಒಡನೆಯೇ ಪುಡಿಯಾಗುತ್ತದೆ.

ಆಂಥ್ರಸೈಟ್ ಕಲ್ಲಿದ್ದಲು
ಗಡಸುತನ ಮತ್ತು ಸಾಮರ್ಥ್ಯಇರುವ ಈ ಕಲ್ಲಿದ್ದಲಿಗೆ ಗಡಸು ಕಲ್ಲಿದ್ದಲು ಎಂದೇ ಹೆಸರು. ಇದು ನಿಧಾನವಾಗಿ ಹೊತ್ತಿಕೊಂಡು ಹೊಗೆಯಿಲ್ಲದ ಜ್ವಾಲೆಯೊಂದಿಗೆ ಉರಿಯುತ್ತದೆ. ಬಿಟುಮಿನಸ್ ಕಲ್ಲಿದ್ದಲು ಕೈಗೆ ಅಂಟಿಕೊಂಡು ಕಲೆ ಮಾಡುತ್ತದೆ; ಆದರೆ ಆಂಥ್ರಸೈಟ್ ಕಲೆ ಮಾಡುವುದಿಲ್ಲ. ಈ ಕಲ್ಲಿದ್ದಲು ದೂಳು ಮತ್ತು ಹೊಗೆಯಿಲ್ಲದೆ ಬಹಳ ಸಮಯ ಉರಿಯುವುದರಿಂದ ಬೇರೆ ದರ್ಜೆಯ ಕಲ್ಲಿದ್ದಲಿಗಿಂತ ಹೆಚ್ಚಾಗಿ ಇದನ್ನು ಮನೆಗಳಲ್ಲಿ ಉರುವಲಾಗಿ ಉಪಯೋಗಿಸುತ್ತಾರೆ.

ಗಾಳಿಯ ಸಂಪರ್ಕವಿಲ್ಲದ ರೀತಿಯಲ್ಲಿ ಕಲ್ಲಿದ್ದಲಿನ ಬಟ್ಟಿಯಿಳಿಸುವಿಕೆ (ಭಂಜಕ ಆಸವನ _ ಡಿಸ್ಟ್ರಕ್ಟಿವ್ ಡಿಸ್ಟಿಲೇಷನ್): ಕಲ್ಲಿದ್ದಲನ್ನು ಗಾಳಿಯಿಲ್ಲದೆ ಹೆಚ್ಚಿನ ಉಷ್ಣತೆಯವರೆಗೆ ಕಾಸಿದಾಗ ಅದರಿಂದ ಬಾಷ್ಪಶೀಲ ವಸ್ತುಗಳು ವಿಭಜಿಸಲ್ಪಟ್ಟು ಬಿಡುಗಡೆ ಹೊಂದುವುವು ಮತ್ತು ತಳದಲ್ಲಿ ಪ್ರಧಾನವಾಗಿ ಇಂಗಾಲದಿಂದ ಕೂಡಿದ ವಸ್ತು ಉಳಿಯುವುದು. ಇದಕ್ಕೆ ಕೋಕ್ ಅಥವಾ ಚಾರ್ ಎಂದು ಹೆಸರು. ಮೇಲ್ಕಂಡ ರೀತಿಯಲ್ಲಿ ಒಂದು ಟನ್ ಕಲ್ಲಿದ್ದಲನ್ನು ೯೦೦ಲಿ ಸೆಂ. ಗೆ ಮೇಲ್ಪಟ್ಟ ಉಷ್ಣತೆಯಲ್ಲಿ ಬಟ್ಟಿಯಿಳಿಸಿದಾಗ ೬೦-೭೫ ಲೀಟರುಗಳಷ್ಟು ಟಾರು ಮತ್ತು ಕಚ್ಚಾ ಬೆಂಝೋಲುಗಳೂ ೨-೪ ಕೆಜಿಗಳಷ್ಟು ಅಮೋನಿಯ ಅನಿಲವೂ ೨,೫೦,೦೦೦ ದಿಂದ ೩,೫೦,೦೦೦ ಲೀಟರುಗಳಷ್ಟು ಕಲ್ಲಿದ್ದಲಿನ ಅನಿಲವೂ ಉತ್ಪತ್ತಿ ಆಗುತ್ತವೆ. ಕಡಿಮೆ ಉಷ್ಣತೆಯ ಕಾರ್ಬನೈಸೇಷನ್ನಿನಲ್ಲಿ (ಲೋ ಟೆಂಪರೇಚರ್ ಕಾರ್ಬನೈಸೇಷನ್_ಉಷ್ಣತೆ ೪೦೦ಲಿ - ೭೦೦ಲಿ ಸೆಂ.ವರೆಗೆ) ಪ್ರತಿ ಟನ್ ಕಲ್ಲಿದ್ದಲಿಗೆ ಹೆಚ್ಚಿನ ಉಷ್ಣತೆಯ ಕಾರ್ಬನೈಸೇಷನ್ನಿನಲ್ಲಿ ದೊರೆಯವ ಟಾರಿನ ಎರಡು ಪಟ್ಟು ಟಾರು ಸರಿಸುಮಾರಾಗಿ ದೊರೆಯುತ್ತದೆ. ಆದರೆ ಕಲ್ಲಿದ್ದಲಿನ ಅನಿಲದ ಭಾಗ ಕಡಿಮೆ- ೮೫,೦೦೦ ದಿಂದ ೧,೧೦,೦೦೦ ಲೀಟರುಗಳಷ್ಟು ಮಾತ್ರ. ಅಮೋನಿಯ ಅನಿಲದ ಉತ್ಪನ್ನ ಇಲ್ಲವೆಂದೇ ಹೇಳಬಹುದು. ವಿಶಿಷ್ಟವಾಗಿ ಕಟ್ಟಿದ ಒಲೆಗಳನ್ನು ಈ ಕಾರ್ಬನೈಸೇಷನ್ ಕಾರ್ಯಕ್ಕೆ ಉಪಯೋಗಿಸುತ್ತಾರೆ. ಹೆಚ್ಚಿನ ಉಷ್ಣತೆಯ ಕಾರ್ಬನೈಸೇಷನ್ನಿನಲ್ಲಿ ಉತ್ಪತ್ತಿಯಾದ ಕೋಕನ್ನು ಒಲೆಗಳಿಂದ ಹೊರಕ್ಕೆ ತೆಗೆದಾಗ ಅದು ಅವ್ಯವಸ್ಥಿತ ರೀತಿಯ ಆಕಾರ ಮತ್ತು ಅಳತೆಗಳುಳ್ಳ ಘನವಸ್ತುವಾಗಿರುತ್ತದೆ. ಹೆಚ್ಚಿನ ಉಷ್ಣತೆಯ ಕಾರ್ಬನೀಕರಣದಲ್ಲಿ ದೊರೆಯುವ ಕೋಕನ್ನು ಮುಖ್ಯವಾಗಿ ಲೋಹತಂತ್ರಜ್ಞಾನದಲ್ಲಿ (ಮೆಟಲ್ಲರ್ಜಿಕಲ್) ಕೋಕ್ ಆಗಿ ಉಪಯೋಗಿಸುತ್ತಾರೆ. ಕೋಕನ್ನು ನೀರಿನ ಅನಿಲ ಮತ್ತು ಪ್ರೊಡ್ಯೂಸರ್ ಅನಿಲಗಳ ತಯಾರಿಕೆಗೂ ಬಳಸುತ್ತಾರೆ. ಈ ಅನಿಲಗಳನ್ನು ಕೃತಕ ಗೊಬ್ಬರ ಮತ್ತು ಕೃತಕ ಇಂಧನದ ತಯಾರಿಕೆಗಳಿಗೆ ಬಳಸುತ್ತಾರೆ. ಕಡಿಮೆ ಉಷ್ಣತೆಯ ಕಾರ್ಬನೀಕರಣದಿಂದ ಉತ್ಪತ್ತಿಯಾದ ಕೋಕನ್ನು ಮನೆಗಳಲ್ಲಿ ಒಲೆಗಳನ್ನು ಉರಿಸಲು ಉಪಯೋಗಿಸುತ್ತಾರೆ. ಕಲ್ಲಿದ್ದಲಿನ ಬಟ್ಟಿಯಿಳಿಸುವಿಕೆ ಕಲ್ಲಿದ್ದಲ ಅನಿಲದ ತಯಾರಿಕೆಗೆ ಉಪಯುಕ್ತವಾಗಿದೆ.

ಕಲ್ಲಿದ್ದಲಿನ ಟಾರು ಬಣ್ಣದಲ್ಲಿ ಕಂದುಗಪ್ಪು, ಸಾಧಾರಣ ಉಷ್ಣತೆಯಲ್ಲಿ ಇದು ಸ್ನಿಗ್ಧವಾಗಿರುವ ಮತ್ತು ನೀರಿಗಿಂತ ಹೆಚ್ಚು ಸಾಂದ್ರತೆಯುಳ್ಳ ದ್ರವವಸ್ತು. ಟಾರಿನಲ್ಲಿ ಸಾವಯವ ವಸ್ತುಗಳು ಅತ್ಯಂತ ತೊಡಕಾದ ರೀತಿಯಲ್ಲಿವೆ. ಟಾರಿನ ಪ್ರಕೃತಿ ಅದು ತಯಾರಾದ ಉಷ್ಣತೆಯನ್ನು ಅವಲಂಬಿಸಿದೆ. ಅಲ್ಲದೆ ಸ್ವಲ್ಪಮಟ್ಟಿಗೆ ಕಾರ್ಬನೀಕರಣಕ್ಕೂ ಉಪಯೋಗಿಸಲ್ಪಟ್ಟ ಕಲ್ಲಿದ್ದಲಿನ ಜಾತಿಯನ್ನು ಸಹ ಅವಲಂಬಿಸಿದೆ. ಹೆಚ್ಚಿನ ಉಷ್ಣತೆಯ ಕಾರ್ಬನೀಕರಣದಿಂದ ದೊರೆತ ಟಾರಿನಲ್ಲಿ ಹೆಚ್ಚು ಭಾಗ ಆರೋಮ್ಯಾಟಿಕ್ ಸಂಯುಕ್ತ ವಸ್ತುಗಳಾದ ಬೆಂಝೀನ್ ಮತ್ತು ಅದರ ಅನುರೂಪಿ ವಸ್ತುಗಳೂ ನ್ಯಾಫ್ತಲೀನ್, ಆಂಥ್ರಸೀನ್, ಫೀನಾಲಿನ ಘಟಕ ವಸ್ತುಗಳೂ ಇತರ ಸಂಬಂಧೀ ವಸ್ತುಗಳೂ ಇವೆ. ಕಡಿಮೆ ಉಷ್ಣತೆಯ ಕಾರ್ಬನೀಕರಣದಲ್ಲಿ ದೊರೆತ ಟಾರಿನಲ್ಲಿ ಮುಖ್ಯವಾಗಿ ಪ್ಯಾರಫಿನ್ ವಸ್ತುಗಳಿದ್ದು, ಫೀನಾಲಿನ ಸಂಯುಕ್ತವಸ್ತುಗಳೂ ನ್ಯಾಫ್ತಲೀನ್ ಸಂಬಂಧಿತ ವಸ್ತುಗಳೂ ಇರುತ್ತವೆ.

ಟಾರನ್ನು ಬಟ್ಟಿಯಿಳಿಸುವಾಗ ಸಾಧಾರಣವಾಗಿ ಈ ಕೆಳಕಂಡ ಪದಾರ್ಥಗಳು ದೊರೆಯತ್ತವೆ:
 ಹಗುರವಾದ ಎಣ್ಣೆ (ಲೈಟ್ ಆಯಿಲ್. ೨೦೦ಲಿಸೆಂ.ಗಿಂತ ಕಡಿಮೆ ಉಷ್ಣತೆ): ಇದರಲ್ಲಿ ಮುಖ್ಯವಾಗಿ ಬೆನ್ಸೀನ್ ಮತ್ತು ಅದರ ಅನುರೂಪಿ ವಸ್ತುಗಳಿರುತ್ತವೆ.
 ಮಧ್ಯಮ ಎಣ್ಣೆ (ಮಿಡ್ಲ್‌ ಆಯಿಲ್, ೨೦೦ಲಿ - ೨೫೦ಲಿ ಸೆಂ. ವರೆಗೆ): ಈ ಭಾಗದಲ್ಲಿ ಮುಖ್ಯವಾಗಿ ಫೀನಾಲುಗಳು ಕ್ರಿಯಸೋಲುಗಳು ಮತ್ತು ನ್ಯಾಫ್ತಲೀನ್ ಇರುತ್ತವೆ.
 ಭಾರ ಎಣ್ಣೆ (ಹೆವಿ ಆಯಿಲ್. ೨೫೦ಲಿ - ೩೦೦ಲಿ ಸೆಂ. ವರೆಗೆ): ಇದರಲ್ಲಿ ನ್ಯಾಫ್ತಲೀನಿನ ಸಂಬಂಧಿಕ ವಸ್ತುಗಳು ಅಥವಾ ಕ್ರಿಯಸೋಟ್ ಇರುತ್ತವೆ.
 ಆಂಥ್ರಸೀನ್ ಎಣ್ಣೆ (೩೦೦ಲಿ - ೩೫೦ಲಿ ಸೆಂ. ವರೆಗೆ): ಈ ಭಾಗದಲ್ಲಿ ಮುಖ್ಯವಾಗಿ ಫೀನಾಂಥ್ರೀನ್ ಮತ್ತು ಆಂಥ್ರಸೀನುಗಳು ಇರುತ್ತವೆ 
 ಪಿಚ್: ಇದು ಅಂತ್ಯದಲ್ಲಿ ಉಳಿಯುವ ಶೇಷವಸ್ತು.
ಈ ಮೇಲ್ಕಂಡ ಭಿನ್ನ ಭಾಗಗಳಿಂದ ದೊರಕುವ ಮುಖ್ಯವಸ್ತುಗಳನ್ನು ಬೇರೆ ಬೇರೆಯಾಗಿ ವಿಂಗಡಿಸಲು ಪ್ರತ್ಯೇಕ ವಿಧಾನಗಳನ್ನು ಅವಲಂಬಿಸಬೇಕು.

ಪಿಚ್
ಕಲ್ಲಿದ್ದಲಿನ ಟಾರಿನ ಉತ್ಪನ್ನಗಳಲ್ಲಿ ಅಧಿಕ ಭಾಗವಿದು. ಇದು ನೀರು ಮತ್ತು ಗಾಳಿಯ ನಿರೋಧಕ ವಸ್ತುವಾಗಿರುವುದರಿಂದ ಇದರ ಉಪಯೋಗ ನೀರಿನ ನಿರೋಧಕವಾಗಿ ಉಂಟು. ಪಿಚ್ ನಿಂದ ರಸ್ತೆಗಳಿಗೆ ಡಾಂಬರು ಮಾಡುತ್ತಾರೆ. ಇದನ್ನು ಮನೆಗಳ ಮೇಲ್ಛಾವಣಿಗಳ ಮೇಲೆ ಬಳಿಯಲು ಉಪಯೋಗಿಸುತ್ತಾರೆ. ಗಾಳಿಯ ಸಂಪರ್ಕವಿಲ್ಲದ ರೀತಿಯಲ್ಲಿ ಪಿಚ್ಚನ್ನು ಬಟ್ಟಿಯಿಳಿಸಿದಾಗ ಪಿಚ್ ಕೋಕ್ ಶೇಷವಸ್ತುವಾಗಿ ದೊರೆಯುತ್ತದೆ. ಇದರಲ್ಲಿ ಶೇಕಡ ೯೮ರಷ್ಟು ಭಾಗ ಸ್ಥಿರ ಇಂಗಾಲ ಇರುವುದು. ಈ ಕಾರಣದಿಂದ ಪಿಚ್ ಕೋಕನ್ನು ಮುಖ್ಯವಾಗಿ ವಿದ್ಯುತ್ ಧ್ರುವಗಳ ತಯಾರಿಕೆಗೂ ಶ್ರೇಷ್ಠದರ್ಜೆಯ ಎರಕಗಳ ಕೆಲಸಗಳಲ್ಲಿ ಅಚ್ಚುಗಳ ತಯಾರಿಕೆಗೂ ಉಪಯೋಗಿಸುತ್ತಾರೆ. 

ಬಿಟುಮಿನ್ಗಳು ಮತ್ತು ಬಿಟುಮಿನಸ್ ವಸ್ತುಗಳು
ಇವನ್ನು ಸಾಮಾನ್ಯವಾಗಿ ಕಪ್ಪು ರಾಳಗಳೆಂಬ ಗುಂಪಿಗೆ ಸೇರಿಸುವುದು ವಾಡಿಕೆ. ಸಮುದ್ರದಲ್ಲಿನ ಕಾರ್ಬನಿಕ ವಸ್ತುಗಳು ಜೀರ್ಣವಾಗಿ ಮೂಲಸ್ವರೂಪದ ಬದಲಾವಣೆಗಳ ಪರಿಣಾಮದಿಂದ ಲೋಹಗಳ ನಿಧಿಗಳಂತೆ ರೂಪ ತಳೆದು ಪ್ರಾಕೃತಿಕ ಬಿಟುಮಿನಸ್ ವಸ್ತುಗಳು ದೊರೆಯುತ್ತವೆ. ಆದರೆ ಇವು ಕಲ್ಲಿದ್ದಲಿನಂತೆ ನಿರ್ಮಾಣವಾದ ಸ್ಥಾನದಲ್ಲಿ ಇರದೆ ದೂರ ಒಯ್ಯಲ್ಪಟ್ಟು ಬೇರೆ ಸ್ಥಳಗಳಲ್ಲಿ ಅನಿಲರೂಪದಲ್ಲಿಯೋ ದ್ರವರೂಪದಲ್ಲಿಯೋ ಮೆದುರೂಪದಲ್ಲಿಯೋ ಕಂಡುಬರುತ್ತವೆ. ತಯಾರಿಸಲ್ಪಟ್ಟ ಬಿಟುಮಿನ್ ಮತ್ತು ಕಪ್ಪುರಾಳಗಳು ಮುಖ್ಯವಾಗಿ, ಕೆಲವು ಕಚ್ಚಾ ಪೆಟ್ರೋಲಿಯಂ ಎಣ್ಣೆಗಳನ್ನು ಬಟ್ಟಿಯಿಳಿಸಿದಾಗ ಅಂತ್ಯದಲ್ಲಿ ಉಳಿಯುವ ಶೇಷವಸ್ತುಗಳಿಂದ ದೊರೆಯುತ್ತವೆ. ಆದ್ದರಿಂದ ಈ ವಸ್ತುಗಳು ಕಲ್ಲಿದ್ದಲ ಟಾರಿನಿಂದ ದೊರೆಯುವ ಪಿಚ್ನ ಸರೂಪಿಯಾಗಿವೆ. ಎಂಜಿನಿಯರಿಂಗಿನಲ್ಲಿ ಇವನ್ನು ಮನೆಗಳ ಮೇಲ್ಚಾವಣಿಗಳ ಮೇಲೆ ಮತ್ತು ರಸ್ತೆಗಳ ಮೇಲೆ ಹಚ್ಚುವುದಕ್ಕೂ ನೀರಿನ ಭಂಡಾರಗಳ ಮತ್ತು ಕಾಲುವೆಗಳ ಒಳಭಾಗಕ್ಕೆ ಬಳಿಯುವುದಕ್ಕೂ ಕಾಲುವೆಗಳ ಒಡ್ಡುಗಳನ್ನು ಭದ್ರಪಡಿಸಲಿಕ್ಕೂ ಉಪಯೋಗಿಸುತ್ತಾರೆ. ಕೈಗಾರಿಕೆಗಳಲ್ಲಿ ಬಿಟುಮಿನಸ್ ಪದಾರ್ಥಗಳನ್ನು ಇತರ ಪದಾರ್ಥಗಳೊಂದಿಗೆ ಮಿಶ್ರಮಾಡಿ ನಾನಾ ಬಗೆಯಲ್ಲಿ ಉಪಯೋಗಿಸುತ್ತಾರೆ. ಕಪ್ಪುರಾಳಗಳ ಹೆಂಚುಗಳನ್ನು ತಯಾರಿಸುವುದು, ಕೈಹಿಡಿಗಳ ಹೊದಿಕೆ ಮಾಡುವುದು, ಕೇಬಲ್ ತಂತಿಗಳಿಗೆ ಹೊರ ಕವಚ ಒದಗಿಸುವುದು, ಜಲಾಭೇದ್ಯವಸ್ತುವಾಗಿ ಉಪಯೋಗಿಸುವುದು, ಒಣಮರಗಳ ಮೇಲೆ ರಕ್ಷಣೆಗೆಂದು ಬಳಿಯುವುದು ಇವೇ ಮೊದಲಾದುವು ಇದರ ಕೆಲವು ಮುಖ್ಯ ಉಪಯೋಗಗಳು.	(ಎಂ.ಯು.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ